ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು - ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ - ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು-ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.
A Kannada book by Akshara Prakashana / ಅಕ್ಷರ ಪ್ರಕಾಶನ
ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ೧೯೩೬ ಏಪ್ರಿಲ್ ೪ರಂದು ಜನಿಸಿದ ಶ್ರೀನಿವಾಸ ವೈದ್ಯ ಅವರು ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು ನಿವೃತ್ತರಾದವರು. ಇವರ ಹೆಚ್ಚಿನ ಬರವಣಿಗೆಗಳು ಆರಂಭವಾಗಿದ್ದೇ ಇವರ ವೃತ್ತಿ-ನಿವೃತ್ತಿಯ ಸುಮಾರಿಗೆ. ಶೀನೂ ಎಂಬ ಕಾವ್ಯನಾಮದೊಂದಿಗೆ ‘ಅಪರಂಜಿ’ ಪತ್ರಿಕೆಯಲ್ಲಿ ಹಾಸ್ಯಪ್ರಧಾನ ಬರಹಗಳಿಂದ ಆರಂಭಿಸಿದ ವೈದ್ಯ ಅವರು, ಬಳಿಕ, ಲಘು-ಗಂಭೀರವೆಂದು ವಿಭಾಗ ಮಾಡಲಾಗದ ಹಾಗೂ ಕಥೆ-ಪ್ರಬಂಧಗಳೆಂದು ಪ್ರತ್ಯೇಕಿಸಲಾಗದ ವಿಶಿಷ್ಟ ಬರಹಗಳನ್ನು ರಚಿಸುತ್ತ ಬಂದಿದ್ದಾರೆ. ‘ಹಳ್ಳ ಬಂತು ಹಳ್ಳ’ ಎಂಬ ಕಾದಂಬರಿಯನ್ನಲ್ಲದೆ ‘ತಲೆಗೊಂದು ತರತರ’, ‘ಮನಸುಖರಾಯನ ಮನಸು’, ‘ರುಚಿಗೆ ಹುಳಿಯೊಗರು’, ‘ಅಗ್ನಿಕಾರ್ಯ’ ಎಂಬ ನಾಲ್ಕು ಪ್ರಬಂಧ/ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ‘ಹಳ್ಳ ಬಂತು ಹಳ್ಳ’ ಕಾದಂಬರಿಗೆ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ದೊರಕಿವೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವೈದ್ಯ ಅವರು ಸಾಹಿತ್ಯ-ಸಂಸ್ಕೃತಿ ಚಟುವಟಿಕೆಗಳನ್ನು ನಡೆಸುವ ‘ಸಂವಾದ’ ಸಂಸ್ಥೆಯ ರೂವಾರಿಯೂ ಆಗಿದ್ದಾರೆ.